Monday, May 11, 2009

ಅಭಿಸಾರಿಕೆ (ಭಾಗ-1)

ಲೇಖನ: ಪದ್ಮಿನಿ


ಅಶ್ವಪುರ ವಸುಂಧರೆಯ ಹುಟ್ಟೂರು. ಆದರೆ ಅವಳು ಹುಟ್ಟಿನಿಂದಲೂ ಬೆಳೆದದ್ದು, ಇಪ್ಪತ್ತು ವರುಷಗಳನ್ನು ಕಳೆದದ್ದು ತನ್ನ ಸೋದರ ಮಾವನ ಆಶ್ರಯದಲ್ಲಿ. ತಂದೆಯ ಆಸರೆಯಾಗಲೀ, ತಾಯಿಯ ಮಮತೆಯಾಗಲೀ ಅವಳಿಗೆ ಲಭಿಸಿರಲೇ ಇಲ್ಲ. ಅವಳು ಹುಟ್ಟುವುದಕ್ಕೆ ಎಷ್ಟೋ ದಿನಗಳ ಮುಂಚೆಯೇ ತಂದೆ ತೀರಿ ಹೋಗಿದ್ದ. ತಾಯಿ ಆಸ್ಥಾನದಲ್ಲಿ ಒಬ್ಬ ನರ್ತಕಿ. ಕಾಲು ವರ್ಷಕ್ಕೊಮ್ಮೆ ಅಶ್ವಪುರಕ್ಕೆ ತನ್ನ ಮಗಳನ್ನು ನೋಡಿಕೊಂಡು ಹೋಗಲು ಬರುತ್ತಿದ್ದ ಅವಳು ಹಾಗೆ ಬಂದಾಗ ಬೆಳ್ಳಿಯ ನಾಣ್ಯಗಳನ್ನೂ, ಹೊಸ ಬಟ್ಟೆಗಳನ್ನೂ ತಂದು ಕೊಡುತ್ತಿದ್ದಳು. ವಸುಂಧರೆಗೆ ಆ ನಾಣ್ಯಗಳಾಗಲೀ, ಹೊಸ ಬಟ್ಟೆಗಳಾಗಲೀ ಬೇಕಿರಲಿಲ್ಲ. ಇನ್ನಾದರೂ ತನ್ನ ಜೊತೆಗೆ ಇರುವಂತೆ ಅಮ್ಮನನ್ನು ಅತ್ತು ಬೇಡಿಕೊಳ್ಳುತ್ತಿದ್ದಳು. ಆದರೆ ತಾಯಿಗೆ ಮಗಳ ಆ ಒಂದು ಬಯಕೆಯನ್ನು ಈಡೇರಿಸುವುದು ಎಂದಿಗೂ ಸಾಧ್ಯವಾಗಿರಲಿಲ್ಲ. ತನ್ನ ಸೋದರ ಮಾವನಾಗಲೀ, ಊರ ಜನರಾಗಲೀ ತನ್ನ ತಾಯಿಯನ್ನು ಗೌರವಿಸದಿರುವುದು ವಸುಂಧರೆಗೆ ತಾನು ಬೆಳೆದು ದೊಡ್ಡವಳಾದಂತೆ ತಿಳಿಯತೊಡಗಿತ್ತು. ಆಸ್ಥಾನ ನರ್ತಕಿಯರ ಬದುಕು ಹೇಗಿರುತ್ತದೆಂದು ಅವಳಿಗೆ ಅರಿವಾಗತೊಡಗಿತ್ತು. ಆಸ್ಥಾನದಲ್ಲಿ ನರ್ತಕಿಯರಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಉಪಚಾರ. ಆಸ್ಥಾನದ ಹೊರಗೆ ಅವರೆಂದರೆ ಸಮಾಜಕ್ಕೆ ಅನಾದರ. ಬಹಶಃ ಅದೇ ಕಾರಣಕ್ಕೋ ಏನೋ ತನ್ನ ತಾಯಿಗೆ ಆಸ್ಥಾನವನ್ನು ತೊರೆದು ತನ್ನೊಂದಿಗೆ ಬಾಳು ಸಾಗಿಸುವುದು ಕಷ್ಟವಾಗಿರಬಹುದು ಎಂದು ಯೋಚಿಸಿ ಆ ಒಂದು ಸತ್ಯವನ್ನು ಒಪ್ಪಿಕೊಳ್ಳಲು ಯತ್ನಿಸುತ್ತಿದ್ದಳು ವಸುಂಧರೆ.

ಚಿಕ್ಕ ವಯಸ್ಸಿನ ಪುಟ್ಟ ಹುಡುಗಿಯಾಗಿದ್ದಾಗ ಅದೇಕೆ ಜನ ತಾನೆಂದರೆ ಮೂಗು ಮುರಿಯುತ್ತಿದ್ದರು, ಅದೇಕೆ ತನ್ನ ಗೆಳತಿಯರು ತನ್ನೊಂದಿಗೆ ಆಟವಾಡಿದರೆ ಅವರ ಅಮ್ಮಂದಿರಿಗೆ ಇಷ್ಟವಾಗುತ್ತಿರಲಿಲ್ಲ ಎಂದು ವಸುಂಧರೆಗೆ ಅರ್ಥವಾಗಿರಲಿಲ್ಲ. ಆದರೆ ಅವಳು ತನ್ನ ಹನ್ನೆರಡರ ವಯಸ್ಸನ್ನು ದಾಟುತ್ತಿದ್ದಂತೆಯೇ ಕ್ರಮೇಣ ಎಲ್ಲ ಬದಲಾದಂತೆ ಎನಿಸತೊಡಗಿತ್ತು. ತಾಯಿಯ ಅಪ್ರತಿಮ ಸೌಂದರ್ಯದ ಲಕ್ಶಣಗಳು ವಸುಂಧರೆಯಲ್ಲಿ ಮೂಡತೊಡಗಿದ್ದವು. ಬೆರಗು ಹುಟ್ಟಿಸುವಂಥ ಯೌವ್ವನ ವಸುಂಧರೆಯನ್ನು ಬಹು ಬೇಗನೆ ಆತುರದಿಂದ ಅರಸಿ ಬಂದಂತಿತ್ತು. ಅವಳು ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಜನರ ಕಣ್ಣುಗಳು ಅವಳನ್ನು ಹಿಂಬಾಲಿಸಿದ್ದವು. ಅವಳನ್ನು ಕಾಣುತ್ತಿದ್ದಂತೆಯೇ ಮುಖ ತಿರುಗಿಸುತ್ತಿದ್ದವರು ಈಗ ಅವಳನ್ನು ಕಾಣುವ ಹಂಬಲದಲ್ಲಿ ಮುಖ ತಿರುಗಿಸತೊಡಗಿದ್ದರು. ವಸುಂಧರೆಗೆ ಅದೆಲ್ಲ ಅರ್ಥವಾಗುತ್ತಿದ್ದಂತೆಯೇ ಇನ್ನೂ ಮೂರು ವರುಷಗಳು ಕಳೆದವು. ಹದಿನಾರರ ಹೊಸ್ತಿಲಲ್ಲಿ ನಿಂತ ವಸುಂಧರೆ ಸಾಕ್ಷಾತ್ ರತಿದೇವಿಯೇ ಎನ್ನುವಂತಾಗಿದ್ದಳು. ಅವಳ ನೀಳವಾದ ದೇಹದ ನಿಲುವು, ಅವಳ ಬಳಕುವ ಸಿಂಹ ಕಟಿಯ ಸೊಬಗಿಗೆ ತಾನೇ ಮಾರು ಹೋದಂತೆ ಅವಳ ಸೊಂಟದುದ್ದಕ್ಕೂ ಬಾಗಿ ಹರಡಿದ ಅವಳ ಕಡುಗಪ್ಪು ಕೇಶರಾಶಿ, ಹಾಲಿನಲ್ಲಿ ನೆನೆಸಿ, ಬೆಳದಿಂಗಳಲ್ಲಿ ತೆರೆದಿಟ್ಟಂತೆ ಕಾಂತಿ ಸೂಸುವ ಅವಳ ಬೆಳ್ಳನೆಯ ಚರ್ಮ ಅವಳೆಂಥ ಚೆಲುವೆಯೆಂದು ಸಾರಿ ಹೇಳುವಂತಿದ್ದವು. ನೋಡಿದವರ ಮನದಲ್ಲಿ ಶಾಶ್ವತವಾಗಿ ಚಿತ್ರಣವಾಗಿಬಿಡಬಹುದಾದಂತಹ ಅವಳ ಆಕರ್ಷಕವಾದ ಮುಖ, ತುಂಟತನವನ್ನೂ, ಮಾದಕತೆಯನ್ನೂ, ಸ್ನೇಹವನ್ನೂ ಬೆರೆಸಿಟ್ಟ ಬಟ್ಟಲುಗಳಂತಹ ಅವಳ ಕಪ್ಪು ಕಣ್ಣುಗಳು, ಕಾಮನಬಿಲ್ಲಿನಂತೆ ಮಣಿದ ಹುಬ್ಬುಗಳು, ಮೊದ್ದಾದ, ಮುದ್ದಾದ ಅವಳ ಮೂಗು, ಸದಾ ಪ್ರೇಮದ ನಗುವನ್ನು ಚೆಲ್ಲುತ್ತಿರುವಂತೆ ಕಂಗೊಳಿಸುವ ಅವಳ ರಸತುಂಬಿದ ತುಂಬು ಅಧರಗಳು, ತೆಳುವಾದ ಅವಳ ನೀಳ ಕತ್ತಿನ ಅಕ್ಕ ಪಕ್ಕ ಸಮತಟ್ಟಾಗಿ ಚಾಚಿದ ಅವಳ ಹೆಗಲುಗಳು, ಅವುಗಳಿಂದ ಬಳ್ಳಿಗಳಂತೆ ಚಾಚಿದ ಅವಳ ಸುಂದರವಾದ ಕೈಗಳು, ಅವಳ ಪ್ರತಿಯೊಂದು ಅಂಗವೂ ಶಿಲ್ಪಿಯೊಬ್ಬನ ಕಲೆಯ ಫಲವೇನೋ ಎನ್ನುವಂತಿತ್ತು.

ಅಶ್ವಪುರದಲ್ಲಿ ವಸುಂಧರೆ ಮನೆ ಮಾತಾಗಿಬಿಟ್ಟಳು. ಅವಳೊಂದಿಗೆ ಸ್ನೇಹ ಬೆಳೆಸಿರದ ಅವಳ ವಯಸ್ಸಿನ ಹುಡುಗಿಯರಿಗೆ ಅವಳು ಅಸೂಯೆಯ ಮೂಲವಾದರೆ ಅವಳ ಸ್ನೇಹಿತೆಯರಿಗೆ ಅವಳು ಹೆಮ್ಮೆಯಾಗಿದ್ದಳು. ಆ ಸ್ನೇಹಿತೆಯರೆಲ್ಲ ಯಾವತ್ತೂ ಅವಳ ಅಕ್ಕಪಕ್ಕದಲ್ಲೇ ಇರಬಯಸುತ್ತಿದ್ದರು. ವಸುಂಧರೆ ಹುಡುಗರೊಂದಿಗೆ ಯಾವತ್ತೂ ಹೆಚ್ಚು ಸ್ನೇಹವನ್ನು ಬೆಳೆಸಿರಲೇ ಇಲ್ಲ. ಅವಳ ಸಾಮಿಪ್ಯಕ್ಕೆ, ಅವಳ ಸ್ನೇಹಕ್ಕೆ ಹಾತೊರೆಯುವ ಹುಡುಗರ, ಯುವಕರ ಸಂಖ್ಯೆ ದಿನದಿನಕ್ಕೂ ಬೆಳೆಯತೊಡಗಿತ್ತು. ಅವಳ ಸ್ನೇಹಿತೆಯರಿಗಾದರೋ ಇದರಿಂದ ಲಾಭವೇ ಆದಂತಾಗಿತ್ತು. ಏಕೆಂದರೆ ವಸುಂಧರೆಯನ್ನು ನೇರವಾಗಿ ಮಾತನಾಡಿಸಲಾಗದ ಯುವಕರು ಮೊದಲು ಅವಳ ಗೆಳತಿಯರೊಂದಿಗೆ ಸ್ನೇಹ ಬೆಳೆಸುವ ಪ್ರಯತ್ನ ಮಾಡತೊಗಿದ್ದರು. ಸಖಿ ಅನುಸೂಯೆಗೆ ಈಗ ಅವಳ ಮಾತಿನಂತೆ ನಡೆಯಲು ಸಿದ್ಧರಿರುವ ಐದಾರು ಹುಡುಗರ ಸ್ನೇಹವಿತ್ತು. ಗೆಳತಿಯರಾದ ಕೃಷ್ಣವೇಣಿ, ಚಂದ್ರಿಕೆ, ಸಾರಂಗಿ, ಚಿತ್ರಾಂಗದೆ, ಅಂಜನಿ, ಹೇಮಾವತಿ ಮುಂತಾದವರೂ ಅಷ್ಟೇ, ವಸುಂಧರೆಯ ಸ್ನೇಹವನ್ನು ಕೋರಿ ಬಂದ ಹಲವು ಯುವಕರನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ನಡೆಸಿಕೊಳ್ಳುತ್ತಿದ್ದರು. ಗೆಳತಿಯರ ಈ ನಡುವಳಿಕೆಯನ್ನು ವಸುಂಧರೆ ಯಾವತ್ತೂ ಸಮ್ಮತಿಸಲಿಲ್ಲ. ಆದರೆ ತನ್ನ ಅನುಪಸ್ಥಿತಿಯಲ್ಲಿ ತನ್ನ ಗೆಳತಿಯರು ಆ ಹುಡುಗರೊಂದಿಗೆ ಒಡನಾಡುವುದನ್ನು ತಡೆಯುವುದು ಅವಳಿಗೆ ಸಾಧ್ಯವಿರಲಿಲ್ಲ.

ವಸುಂಧರೆಗೆ ತನ್ನ ಚೆಲುವಿನ ಬಗ್ಗೆ ಅಹಂಕಾರವಾಗಲೀ, ತನ್ನ ಸ್ನೇಹವನ್ನು ಬಯಸುವ ಹುಡುಗರ ಬಗ್ಗೆ ತಿರಸ್ಕಾರವಾಗಲೀ ಇರಲಿಲ್ಲ. ಆದರೂ ಯಾಕೋ ಅವಳಿಗೆ ಯಾವ ಹುಡುಗನೂ, ಯಾವ ಯುವಕನೂ ಇಷ್ಟವಾಗಲಿಲ್ಲ. ತಾರುಣ್ಯ ತಳೆಯುವ ಹೆಣ್ಣಿಗೆ ತನ್ನ ದೇಹದ ಬಗ್ಗೆ ಅರಿವು ಸ್ವಾಭಾವಿಕವಾಗಿ ಮೂಡುವಂತೆ ವಸುಂಧರೆಗೆ ತನ್ನ ದೇಹದಲ್ಲಿ ಕಳೆದ ಕೆಲವು ವರುಷಗಳಲ್ಲಾದ ಬದಲಾವಣೆಗಳ ಬಗ್ಗೆ ಅರಿವಿತ್ತು. ಆ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಅವಳಲ್ಲಿರಬೇಕಾದ ಪ್ರೇಮದ ಭಾವನೆಗಳು, ಹೆಣ್ತನದ ಬಯಕೆಗಳು, ಆಸೆಗಳು ಎಲ್ಲವೂ ಅವಳಲ್ಲಿದ್ದವು, ಆದರೆ ಬೂದಿ ಮುಚ್ಚಿದ ಕೆಂಡದಂತೆ. ಅವುಗಳ ಪ್ರಖರತೆಯ ಅನುಭವವನ್ನು ಮೂಡಿಸುವ, ಅವುಗಳನ್ನು ಈಡೇರಿಸಿಕೊಳ್ಳುವ ಆತುರತೆಯನ್ನು ತರುವ ವಯಸ್ಸು ಅವಳಿಗಿನ್ನೂ ಆಗಿರಲಿಲ್ಲ. ಆದರೂ ಒಂದೊಂದು ಸಲ ಅವಳ ಮನದಲ್ಲಿ ಹಠಾತ್ತನೆ ಹುಟ್ಟುವ ಬಯಕೆಗಳಿಂದ ಅವಳಿಗೆ ದಿಗಿಲಾಗುತ್ತಿತ್ತು. ಹುಡುಗಿಯೂ ಅನ್ನಲಾಗದ, ವಯಸ್ಸಿಗೆ ಬಂದ ಹೆಣ್ಣೂ ಅನ್ನಲಾಗದ ಆ ಹದಿನಾರರ ವಯಸ್ಸಿನಲ್ಲಿ ಹೆಣ್ಣಿಗೆ ಇಂಥ ದಿಗಿಲುಗಳು ಸ್ವಾಭಾವಿಕ. ಸೂರ್ಯ ಮುಳುಗಿದ ವೇಳೆಯಲ್ಲಿ ಕೆಲವು ಸಲ ಕಾರಣವಿಲ್ಲದೇ ಮೈ ಬಿಸಿಯೇರಿದಾಗ ವಸುಂಧರೆಗೆ ಅದೆಂಥ ಜ್ವರವೆಂದೇ ತಿಳಿಯುತ್ತಿರಲಿಲ್ಲ. ಎಂಥದೋ ತಳಮಳ, ಹೀಂಸೆ ತರುವ ಒಂಟಿತನ. ನಿದ್ರೆ ಬಾರದೇ ಹಾಸಿಗೆಯಲ್ಲಿ ಮಲಗಿ ಕಳೆಯಬೇಕಾದ ದೀರ್ಘ ಸಮಯ. ಆಗೆಲ್ಲ ಯಾವುದೋ ಅಪರಿಚಿತ ಯುವಕನೊಬ್ಬನ ಮುಖ ಅವಳ ಮನಸ್ಸಿನಲ್ಲಿ ಮೂಡುತ್ತಿತ್ತು. ದಿನ ಕಳೆದಂತೆ ಆ ಮುಖ ಓಬ್ಬ ರೂಪವಂತ ಯುವಕನಾಗಿ ಬೆಳೆದಿತ್ತು. ಆತ ಆರು ಆಡಿ ಎತ್ತರದ ಸುಂದರಾಂಗ, ಚೆಲುವ. ಅವಳನ್ನು ನೋಡಿ ನಗುತ್ತಿದ್ದ. ಅವನ ಆ ಆಕರ್ಷಕ ಮುಖ, ನುಗುವಾಗ ಅವನ ಕಣ್ಣುಗಳಲ್ಲಿ ತುಳುಕುತ್ತಿದ್ದ ತುಂಟತನ, ಅವನ ಸುಂದರವಾದ ತುಟಿಗಳಲ್ಲಿ ಮೂಡುತ್ತಿದ್ದ ಆ ಮಂದಹಾಸ ಅವಳಿಗೆ ಹುಚ್ಚು ಹಿಡಿಸುವಂತಿದ್ದವು. ಅವನು ಹಾಗೆ ಅವಳನ್ನು ನೋಡುತ್ತಿದ್ದರೆ ಅವನ ಆ ನೋಟದಲ್ಲಿ ಅವಳು ಕರಗಿ, ನಾಚಿ ನೀರಾಗುತ್ತಿದ್ದಳು. ಅವನು ತನ್ನ ಸಶಕ್ತ ಬಾಹುಗಳನ್ನು ಅವಳತ್ತ ಚಾಚಿದಾಗ ಅವಳು ಓಡೋಡಿ ಅವನ ಬಳಿ ಹೋಗುತ್ತಿದ್ದಳು. ಇನ್ನೇನು ಅವನ ಆ ಬಾಹುಗಳು ತನ್ನನ್ನು ಬಳಸಿ ತಬ್ಬಬೇಕು ಎಂದಾಗ ಅವನು ಮಾಯವಾಗಿಬಿಡುತ್ತಿದ್ದ. ಅದೆಲ್ಲ ಬರೀ ಕಲ್ಪನೆ ಎಂದು ಅವಳಿಗೆ ತಿಳಿದಿದ್ದರೂ ಹಾಗೆ ಅದು ಹಾಠಾತ್ತನೆ ಕೊನೆಗೊಂಡಾಗ ಅವಳಿಗೆ ತೀವ್ರ ನಿರಾಸೆಯಾಗುತ್ತಿತ್ತು. ಜೊತೆಗೆ ಅವನನ್ನು ಇನ್ನೊಮ್ಮೆ ಹಾಗೆ ನೋಡುವ, ಕಾಣುವ, ಅವನ ನೋಟದಲ್ಲಿ ಕರಗುವ, ಅವನ ಬಾಹುಗಳಲ್ಲಿ ಬೆರೆಯುವ ಹಂಬಲ ಅವಳಲ್ಲಿ ಹೆಚ್ಚಾಗುತ್ತಿತ್ತು.

ಋತುಗಳು ಉರುಳಿದವು. ಮತ್ತೊಂದು ವರುಷ ಕಳೆದಿತ್ತು. ವಸುಂಧರೆಯ ಶೂನ್ಯಮನಸ್ಕತೆ ಅವಳ ಗೆಳತಿಯರಿಗೆ ಅರ್ಥವಾಗದಾಯಿತು. ಅದೇಕೆ ಅವಳು ಯಾವಗಲೂ ಏನನ್ನೋ ಯೋಚಿಸುತ್ತಿರುವಂತೆ ಕುಳಿತಿರುವುದು ಅವರಿಗೆ ಅರ್ಥವಾಗದಾಯಿತು. ಕೇಳಿದರೆ ವಸುಂಧರೆ ಏನನ್ನೂ ಹೇಳುತ್ತಿರಲಿಲ್ಲ. ಎಷ್ಟೋ ಬಾರಿ ತಾನೇ ತಾನಾಗಿ ಒಂಟಿಯಾಗಿ ಕುಳಿತಿರುತ್ತಿದ್ದಳು. ಇಲ್ಲವೇ ಯಾರೊಂದಿಗೂ ಮಾತನಾಡದೇ ದಾರಿಯಲ್ಲಿ ನಡೆದು ಹೋಗುತ್ತಿದ್ದಳು. ಅಶ್ವಪುರದ ದಾರಿಗಳಲ್ಲಿ ವಸುಂಧರೆಯಂತಹ ಯುವತಿಯು ನಡೆದು ಹೋಗುತ್ತಿದ್ದರೆ ಅದನ್ನು ಗಮನಿಸದೇ ಇರದಿರುವುದು ಸಾಧ್ಯವಿರಲಿಲ್ಲ. ಅವಳು ತೊಡುವ ಯಾವ ಬಟ್ಟೆಯೂ ಮಸುಕಾಗಿಸದಂತಹ ಯೌವ್ವನದ ಮದ ತುಂಬಿದ ಅವಳ ಸ್ತನಗಳ ಆಕಾರ, ಅವಳ ಎದೆಯ ಕೆಳಗೆ ಸೊಂಟದವರೆಗೂ ಸಮತಟ್ಟಾಗಿ ಹರಡಿದ ಅವಳ ಉದರ ಭಾಗ, ಹಂಸವನ್ನೇ ನಾಚಿಸುವಂತಹ ಅವಳ ನಡೆಗೆ ಕುಲುಕುತ್ತ ತಮ್ಮ ಚೆಲುವನ್ನು ತೋರಿಸಿಕೊಡುವ ಅವಳ ದುಂಡನೆಯ ಸಮೃದ್ಧವಾದ ನಿತಂಬಗಳು ಹತ್ತಿರದಲ್ಲಿದ್ದ ಪ್ರತಿಯೊಬ್ಬ ಪುರುಷನ ಗಮನವನ್ನು ಸೆಳೆಯುತ್ತಿದ್ದವು.


ಮುಂದೆವರಿಯುವುದು...