ಪ್ರಿಯ ಓದುಗರೆ,
ಪ್ರಣಯಪದ್ಮಿನಿಯಲ್ಲಿ ಕಳೆದ ಎರಡು ವರುಷಗಳಲ್ಲಿ ಯಾವುದೇ ಹೊಸ ಅಂಕಣ ಪ್ರಕಟವಾಗದೇ ಇರುವುದು ನಿಮಗೆಷ್ಟು ಬೇಸರ ತಂದಿದೆಯೋ ಅಷ್ಟೇ ಬೇಸರ ನನಗೂ ತಂದಿದೆ. ಅದರೆ ಏನು ಮಾಡುವುದು? ಪ್ರಣಯಪದ್ಮಿನಿಗಾಗಿ ಬರೆಯಲು ಮೊದಲಿನಂತೆ ಈ ಪದ್ಮಿನಿಗೆ ಬಿಡುವಿಲ್ಲ. ಎಷ್ಟೋ ಸಲ ಪ್ರಣಯಪದ್ಮಿನಿಯನ್ನು ಅಂತರ್ಜಾಲದಿಂದ ತೆಗೆದುಹಾಕಿಬಿಡಲೇ ಅನಿಸುತ್ತದೆ. ಆದರೆ ಹಾಗೆ ಮಾಡಲು ಇನ್ನೂ ಮನಸಾಗಿಲ್ಲ. ಈ ಕಡೆ ಕಥೆ-ಕವನಗಳನ್ನು ಬರೆಯಲೂ ಆಗುತ್ತಿಲ್ಲ.
ಇದಕ್ಕೊಂದು ಪರಿಹಾರವಿದೆ. ನಿಮ್ಮಲ್ಲಿ ಯಾರಿಗಾದರೂ ಪ್ರಣಯ ಕಥೆ-ಕವನಗಳನ್ನು, ಶೃಂಗಾರ ಲೇಖನಗಳನ್ನು ಬರೆಯುವ ಅಭಿರುಚಿಯಿದ್ದರೆ ಬರೆದು ಕಳುಹಿಸಬಹುದು. ಅವುಗಳನ್ನು ನಾನು ಪ್ರಣಯಪದ್ಮಿನಿಯಲ್ಲಿ ಪ್ರಕಟಿಸುವೆ. ಇದರಿಂದ ಪ್ರಣಯಪದ್ಮಿನಿ ಎಂದಿನಂತೆ ಬಳಕುತ್ತ ತನ್ನ ತುಂಟತನವನ್ನು ಮುಂದುವರಿಸಬಹುದು. ನನಗೂ ಮತ್ತೆ ಸ್ಫೂರ್ತಿ ಸಿಕ್ಕಂತಾಗಿ ನಾನೂ ಹೊಸ ಲೇಖನಗಳನ್ನು ಆಗಾಗ ಬರೆದು ಪ್ರಕಟಿಸಬಹುದು. ಏನಂತೀರಿ? ಕಾಮೆಂಟು ಬರೆದು ತಿಳಿಸಿರಿ. ಈಮೇಲ್‌ಗಳಿಗೆ ನಾನು ಸ್ಪಂದಿಸುವುದಿಲ್ಲ.
ನನ್ನ ಈ ಪ್ರಸ್ತಾಪದ ಬಗ್ಗೆ ಹೆಚ್ಚು ತಿಳಿಯಬೇಕಿದ್ದರೆ ಮುಂದೆ ಓದಿರಿ.
- ನಿಮ್ಮ ಲೇಖನಗಳು ನಿಮ್ಮ ಹೆಸರಿನಲ್ಲಿ ಪ್ರಕಟವಾಗುವುದರಿಂದ ನಿಮಗೆ ಇಷ್ಟವಾದ ಕಲ್ಪಿತನಾಮ (pseudonym) ಒಂದನ್ನು ಆಯ್ಕೆಮಾಡಿಕೊಂಡು ನಿಮ್ಮ ಲೇಖನಗಳನ್ನು ನನ್ನ ಈಮೇಲ್ ವಿಳಾಸ (padmini.kashyapa@gmail.com) ಕ್ಕೆ ಕಳುಹಿಸಿ. ನಿಮ್ಮ ಕಲ್ಪಿತನಾಮವನ್ನು ನೀವು ಕಳುಹಿಸುವ ಲೇಖನದ ಕೆಳಗೆ ಒದಗಿಸಿ.
- ಪ್ರಣಯಪದ್ಮಿನಿಯಲ್ಲಿ ಅಶ್ಲೀಲತೆಗೆ ಅವಕಾಶವಿಲ್ಲ. ಪ್ರಣಯ ಲೇಖನಗಳನ್ನು ಆದಷ್ಟು ಅಸಭ್ಯತೆಯಿಂದ ದೂರವಿಟ್ಟು ಬರೆದು ಪ್ರಕಟಿಸುವುದು ಪ್ರಣಯಪದ್ಮಿನಿಯ ಉದ್ದೇಶ.
- ಬೇರೆ ತಾಣಗಳಿಂದ ಲೇಖನಗಳನ್ನು ಕದ್ದು ಕಳುಹಿಸಿದರೆ, ಹಾಗೆ ಮಾಡಿದ್ದು ನನಗೆ ಗೊತ್ತಾಗದೇ ಅಂಥ ಲೇಖನಗಳನ್ನು ನಾನು ಪ್ರಕಟಿಸಿಬಿಡಬಹುದು. ಆದರೆ ಮುಂದೊಂದು ದಿನ ಆ ಲೇಖನವನ್ನು ಬ್ಲಾಗಿನಿಂದ ತೆಗೆದುಹಾಕಬೇಕಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ.
- ನೀವು ಕಳುಹಿಸಿದ ಲೇಖನಗಳು ನನಗೆ ಮೆಚ್ಚುಗೆಯಾದರೆ ಮಾತ್ರ ಅವು ಪ್ರಣಯಪದ್ಮಿನಿಯಲ್ಲಿ ಪ್ರಕ್ಟವಾಗುವವು. ಈ ವಿಷಯದಲ್ಲಿ ಯಾವುದೇ ಈಮೇಲ್ ವ್ಯವಹಾರಕ್ಕೆ ಆಸ್ಪದವಿಲ್ಲ.
ವಿ.ಸೂ. ಒಂದು ಹೆಣ್ಣಿನ ದೃಷ್ಟಿಕೋನದಿಂದ ಬರೆದು ಕಳುಹಿಸಲ್ಪಟ್ಟ ಲೇಖನಗಳು ನನಗೆ ಬೇಗನೆ ಮೆಚ್ಚುಗೆಯಾಗುತ್ತವೆ. ನೀವು ಒಬ್ಬ ಹೆಣ್ಣೇ ಆಗಿದ್ದರೆ ನಿಮ್ಮ ಲೇಖನಗಳು ಸಹಜವಾಗಿಯೇ ಆ ದೃಷ್ಟಿಕೋನದಲ್ಲಿರುತ್ತವೆಯಾದ್ದರಿಂದ ಅನಗತ್ಯ ಪ್ರಯತ್ನ ಬೇಡ.
-ಪದ್ಮಿನಿ